ಮದ್ದೂರು
	ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು ಹಾಗೂ ಅದರ ಮುಖ್ಯ ಪಟ್ಟಣ. ತಾಲ್ಲೂಕನ್ನು ಪೂರ್ವದಲ್ಲಿ ಚನ್ನಪಟ್ಟಣ, ಪಶ್ಚಿಮದಲ್ಲಿ ಮಂಡ್ಯ, ದಕ್ಷಿಣದಲ್ಲಿ ಮಳವಳ್ಳಿ. ಉತ್ತರದಲ್ಲಿ ಕುಣಿಗಲು ಹಾಗೂ ವಾಯುವ್ಯದಲ್ಲಿ ನಾಗಮಂಗಲ ತಾಲ್ಲೂಕುಗಳು ಸುತ್ತುವರಿದಿವೆ. ಇಲ್ಲಿ 161 ಗ್ರಾಮಗಳಿವೆ. ಮದ್ದೂರು, ಕೊಪ್ಪ, ಆತಕೂರು, ಚಿಕ್ಕರಸಿನಕೆರೆ ಹೋಬಳಿಗಳು. ವಿಸ್ತೀರ್ಣ 618 ಚ.ಕಿಮೀ. ಜನಸಂಖ್ಯೆ 2,89,704 (2001). ಪಟ್ಟಣದ ಜನಸಂಖ್ಯೆ 26,459 (2001).

	ಇಲ್ಲಿಯ ಹೆಚ್ಚು ಭೂಮಿ ಕೆಂಪು ಮಣ್ಣಿನಿಂದ ಕೂಡಿದೆ. ಮದ್ದೂರಿನ ಸಮೀಪದಿಂದ ಮಳವಳ್ಳಿ ಮತ್ತು ಹಲಗೂರಿನವರೆಗೆ ಹಬ್ಬಿರುವ ಒಂದು ಕಿರುವಿಸ್ತಾರ ಮ್ಯಾಗ್ನಟೈಟ್ ಶಿಲಾಪಟ್ಟಿಯಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ. ನಾಗಮಂಗಲ ತಾಲ್ಲೂಕಿನ ಪೂರ್ವಭಾಗದಿಂದ ಹರಿದು ಬರುವ ಶಿಂಷಾನದಿ ಮದ್ದೂರು ತಾಲ್ಲೂಕನ್ನು ಉತ್ತರದಲ್ಲಿ ಕಿರಂಗೂರಿನ ಹತ್ತಿರ ಪ್ರವೇಶಿಸುತ್ತದೆ. ಇದು ತಾಲ್ಲೂಕಿನ ಮಧ್ಯಭಾಗದಲ್ಲಿ ಉತ್ತರ-ದಕ್ಷಿಣಕ್ಕೆ ಹರಿದು ಮಳ್ಳವಳ್ಳಿ ತಾಲ್ಲೂಕು ಪ್ರವೇಶಿಸಿ ಮುಂದೆ ಕಾವೇರಿನದಿಯನ್ನು ಸೇರುತ್ತದೆ. 

	ತಾಲ್ಲೂಕಿನ ಸರಾಸರಿ ಮಳೆ 670 ಮಿಮೀ. ಬಹುಭಾಗದಲ್ಲಿ ಕೆರೆ ಹಾಗೂ ನಾಲೆಯ ನೀರಾವರಿ ಸೌಕರ್ಯವಿದೆ. ಕೊಪ್ಪದ ಹತ್ತಿರ ನಿರ್ಮಿತವಾಗಿರುವ ಕೊಪ್ಪಕೆರೆಯ ದಕ್ಷಿಣ ಪಾಶ್ರ್ವದ ನಾಲೆ 8 ಕಿಮೀ ಉದ್ದವಿದ್ದು ಚಿಕ್ಕನಹಳ್ಳಿ ಹತ್ತಿರದ ಸುಮಾರು 1618.8 ಹೆಕ್ಟೇರುಗಳಿಗೆ ನೀರುಣಿಸುತ್ತದೆ. ತಗ್ಗಳ್ಳಿಯ ಹತ್ತಿರ ಶಿಂಷಾನದಿಗೆ ಕಟ್ಟಿರುವ ಅಣೆಕಟ್ಟು 251.46 ಮೀಟರ್ ಉದ್ದವಿದ್ದು ಇದರಿಂದ ಹೊರಡುವ ಎರಡು ನಾಲೆಗಳು-ಶಿಂಷಾನದಿ ಬಲದಂಡೆನಾಲೆ (36ಕಿ.ಮೀ) ಮತ್ತು ಶಿಂಷಾನದಿ ಎಡದಂಡೆನಾಲೆ (19ಕಿ.ಮೀ) ಆ ಸುತ್ತಮುತ್ತಣ ಪ್ರದೇಶಕ್ಕೆ ನೀರೊದಗಿಸುತ್ತವೆ. ಮದ್ದೂರಿಗೆ ಸಮೀಪದಲ್ಲಿ ಮದ್ದೂರು ಕೆರೆ ಎಂಬ ದೊಡ್ಡ ಕೆರೆಯಿದೆ. ಮದ್ದೂರು ಅಣೆಕಟ್ಟಿನ ಅಭಿವೃದ್ಧಿಯಿಂದ 364 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮದ್ದೂರು ವಿಭಾಗದ ವಿಶ್ವೇಶ್ವರಯ್ಯ ನಾಲೆಯಿಂದ ಸುಮಾರು 9631 ಹೆಕ್ಟೇರ್ ಪ್ರದೇಶಕ್ಕೆ ನೀರು ಸರಬರಾಜಾಗುತ್ತದೆ.

	ತಾಲ್ಲೂಕಿನ ಮುಖ್ಯ ಬೆಳೆಗಳು ಬತ್ತ, ಕಬ್ಬು, ರಾಗಿ, ಜೋಳ, ಸೇಂಗಾ, ಹುರಳಿ, ತೊಗರಿ, ಕಡಲೆ, ಮೆಣಸಿನಕಾಯಿ ಇತ್ಯಾದಿ. ರೇಷ್ಮೆ ಬೆಳೆ ಇಲ್ಲಿಯ ಜನರ ಮುಖ್ಯ ಉಪಕಸಬು. ತಾಲ್ಲೂಕಿನಲ್ಲಿ ಒಂದು ಸರ್ಕಾರಿ ರೇಷ್ಮೆ ಕೋಠಿ ಹಾಗೂ ಹಿಪ್ಪುನೇರಳೆ ಸಸಿ ಪೋಷಣೆ ಮತ್ತು ತರಬೇತಿ ಕೇಂದ್ರ ಇವೆ. ಉತ್ತಮ ದರ್ಜೆಯ ರೇಷ್ಮೆ ಮೊಟ್ಟೆ ಹಾಗೂ ಹಿಪ್ಪನೇರಳೆ ಸಸಿ ಸರಬರಾಜು ಮಾಡುವ ಕೇಂದ್ರವಿದೆ. ತಾಲ್ಲೂಕಿನಲ್ಲಿ ಮೀನು ಸಾಕಣೆಯ 9 ದೊಡ್ಡ ಕೆರೆಗಳೂ 100 ಚಿಕ್ಕ  ಕೆರೆಗಳೂ ಇವೆ. 7 ಸುಣ್ಣ ಪ್ರಮಾಣದ ಕೈಗಾರಿಕಾ ಸಂಸ್ಥೆಗಳಿವೆ. ಪ್ರಾಥಮಿಕ, ಉನ್ನತ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳೂ ಮೂಲ ಶಿಕ್ಷಣ ಶಾಲೆ, ಶಿಕ್ಷಕರ ಮೂಲ ಶಿಕ್ಷಣ ತರಬೇತಿ ಕೇಂದ್ರ ಮೂರು ಕಿರಿಯ ಕಾಲೇಜು, ಒಂದು ಪ್ರಥಮ ದರ್ಜೆ ಕಾಲೇಜು ಇವೆ.

	ಶಿವಾರಗುಡ್ಡ, ಸೋಮನಹಳ್ಳಿ, ಶಿವಪುರ, ನಿಡಘಟ್ಟ, ಕಾಳಮುದ್ದನದೊಡ್ಡಿ ತಾಲ್ಲೂಕಿನ ಮುಖ್ಯ ಸ್ಥಳಗಳು. ಮದ್ದೂರಿಗೆ 12 ಕಿಮೀ ದೂರದಲ್ಲಿರುವ ಶಿವಾರಗುಡ್ಡ ಒಂದು ಪ್ರೇಕ್ಷಣೀಯ ಸ್ಥಳವಾಗಿದ್ದು ಇದನ್ನು ಶಿವಾರಗುಡ್ಡ ವಿದ್ಯಾಪೀಠ ಎಂದು ಕರೆಯುತ್ತಾರೆ. ಇಲ್ಲಿ ಒಂದು ವಯಸ್ಕರ ಶಿಕ್ಷಣ ಕೇಂದ್ರವಿದೆ. ಇಲ್ಲಿ ಡೆನ್ಮಾರ್ಕಿನ ಯೋಜನೆಯಂತೆ ಶಿಕ್ಷಣಾರ್ಥಿಗಳಿಗೆ ತಾಂತ್ರಿಕ ಬೇಸಾಯ ಕ್ರಮ ಮತ್ತು ಸುಧಾರಿತ ಬೇಸಾಯ ಪದ್ಧತಿ ಕುರಿತಂತೆ ಶಿಕ್ಷಣ ನೀಡಲಾಗುತ್ತಿದೆ. ವಿ.ಸಿ. ಫಾರಮ್ ಇಲ್ಲಿಯ ಮತ್ತೊಂದು ಬೇಸಾಯ ಕ್ಷೇತ್ರ. ಇಲ್ಲಿ ಜಪಾನ್ ದೇಶದ ಬೇಸಾಯ ತಜ್ಞರು ಆಧುನಿಕ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುವರು. ಡೆನ್ಮಾರ್ಕ್-ಮೈಸೂರು ಯೋಜನೆಯಂತೆ ಇಲ್ಲಿ ಒಂದು ಕೋಳಿಸಾಕಣೆ ಕೇಂದ್ರ ಸ್ಥಾಪಿತವಾಗಿದ್ದು ವೈಜ್ಞಾನಿಕವಾಗಿ ಪುಷ್ಟಿಕರ ಆಹಾರ ನೀಡಿ ಉತ್ತಮ ತಳಿಯ ಕೋಳಿಗಳನ್ನು ಸಾಕುವ ವಿಧಾನವನ್ನು ಹೇಳಿಕೊಡಲಾಗುತ್ತದೆ. ಇಲ್ಲಿ ಗ್ರಾಮ ಸೇವಕ ಶಿಕ್ಷಣ ತರಬೇತಿ ಕೇಂದ್ರವೂ ಇದೆ. ಪ್ರಶಾಂತವಾಗಿರುವ ಬೆಟ್ಟದ ಮೇಲೆ ಒಂದು ಆಶ್ರಮವಿದೆ. ಮದ್ದೂರಿಗೆ ಕಿಮೀ ದೂರದಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಸೋಮನಹಳ್ಳಿಯಲ್ಲಿ ಭೂಸವಕಲು ರಕ್ಷಣಾ ತರಬೇತಿ ಕೇಂದ್ರವಿದೆ. ಈ ಗ್ರಾಮದ ಸಮೀಪದಲ್ಲಿ ಸ್ಕೂಟರ್ ತಯಾರಿಸುವ ಒಂದು ಕಾರ್ಖಾನೆ ಸ್ಥಾಪಿತವಾಗಿತ್ತು. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ನಿಡಘಟ್ಟದಲ್ಲಿ ಒಂದು ಮದ್ದೂರಿಗೆ ಸುಮಾರು 11ಕಿಮೀ ದೂರದಲ್ಲಿರುವ ಕಾಳಮುದ್ದನದೊಡ್ಡಿಯಲ್ಲಿ ಒಂದು ಸಕ್ಕರೆ ಕಾರ್ಖಾನೆ ಸ್ಥಾಪಿತವಾಗಿದೆ (1974). ಈ ಕಾರ್ಖಾನೆ ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕುಗಳಲ್ಲಿ ಬೆಳೆಯುವ ಕಬ್ಬನ್ನು ಅರೆಯುತ್ತದೆ. ಈ ಊರಿನಲ್ಲಿ ಒಂದು ಪ್ರಥಮ ದರ್ಜೆ ಕಾಲೇಜು ಸಹ ಇದೆ. ಬೆಂಗಳೂರು-ಮೈಸೂರು ರೈಲುಮಾರ್ಗ ಮದ್ದೂರಿನ ಸಮೀಪದಲ್ಲಿ ಹಾದು ಹೋಗುತ್ತದೆ. ಮದ್ದೂರಿಗೆ 2ಕಿಮೀ ದೂರದಲ್ಲಿರುವ ಶಿವಪುರದಲ್ಲಿ ರೈಲು ನಿಲ್ದಾಣವಿದೆ. ಮದ್ದೂರು ಮತ್ತು ಚಿಕ್ಕನಹಳ್ಳಿಗಳಲ್ಲಿ  ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. 

	ಮದ್ದೂರು ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಮುಖ್ಯ ಪಟ್ಟಣ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮೈಸೂರಿನ ಈಶಾನ್ಯಕ್ಕೆ  57 ಕಿಮೀ ದೂರದಲ್ಲಿ ಶಿಂಷಾ ನದಿಯ (ಮದ್ದೂರು ಹೊಳೆ) ಬಲದಂಡೆಯ ಮೇಲಿದೆ. ಮಂಡ್ಯ ಜಿಲ್ಲೆಯ ದೊಡ್ಡ ಪಟ್ಟಣಗಳಲ್ಲಿ ಇದು ಐದನೆಯ ಸ್ಥಾನ ಪಡೆದಿದೆ. ಜನಸಂಖ್ಯೆ 17,402 (1981).

	ಈ ಪಟ್ಟಣ ಪುರಸಭೆಯನ್ನು ಹೊಂದಿದೆ.  ವಿದ್ಯುಚ್ಛಕ್ತಿ ಹಾಗೂ ನೀರಿನ ಸೌಲಭ್ಯವಿದೆ. ಇಲ್ಲಿ ತೋಟಗಾರಿಕೆ ಇಲಾಖೆ, ರೇಷ್ಮೆಕೋಠಿ ಹಾಗೂ ಹಿಪ್ಪುನೇರಳೆ ಸಸಿ ಪೋಷಣೆ ಮತ್ತು ತರಬೇತಿ ಕೇಂದ್ರ, ಮೀನುಸಾಕಣೆ ಕೇಂದ್ರ ಇವೆ. ಪ್ರವಾಸಿ ಮಂದಿರವಿದೆ. ಒಂದು ಖಾಸಗಿ ಕಿರಿಯ ಕಾಲೇಜು (ಅರ್ಜುನಪುರಿ ಕಲೆ ಮತ್ತು ವಿಜ್ಞಾನಗಳ ಕಾಲೇಜು). ಎರಡು ಪ್ರೌಢಶಾಲೆಗಳು, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್, ತಾಲ್ಲೂಕು ಕಚೇರಿ, ಆಸ್ಪತ್ರೆ ಮುಂತಾದವು ಇವೆ. ಮದ್ದೂರಿನಿಂದ ಮಳವಳ್ಳಿ, ಶಿವಸಮುದ್ರ ಕೊಳ್ಳೇಗಾಲ, ಕುಣಿಗಲ್ಲು,  ಹುಲಿಯೂರು ದುರ್ಗ ಮುಂತಾದ ಕಡೆಗಳಿಗೆ ಅನುಕೂಲ ರಸ್ತೆಗಳಿವೆ.

	ಕದಂಬ ಋಷಿ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದುದರಿಂದ ಕದಂಬ ಕ್ಷೇತ್ರವೆಂದೂ ಶ್ರೀಕೃಷ್ಣನ ಜೊತೆ ತೀರ್ಥಯಾತ್ರೆಗಾಗಿ ಬಂದ ಪಾಂಡವರಲ್ಲಿ ಅರ್ಜುನನು ನರಸಿಂಹ ದೇವರನ್ನು ಪೂಜಿಸಿದ್ದರಿಂದ ಅರ್ಜುನಪುರಿ ಎಂಬ ಹೆಸರಾಯಿತೆಂದೂ ಸ್ಥಳಪುರಾಣ. ಅನಂತರ ಇದನ್ನು ಮದ್ದೂರು ಎಂದು ಕರೆಯಲು ಪ್ರಾರಂಭಿಸಿ ಇದೇ ಮದ್ದೂರಾಯಿತೆಂದೂ ಐತಿಹ್ಯ. ಟಿಪ್ಪು ಇಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟಿದ್ದರಿಂದ ಮದ್ದೂರಾಯಿತೆಂದೂ ಪ್ರತೀತಿ.

	ಹೊಯ್ಸಳರ ಕಾಲದಲ್ಲಿ ಈ ಊರು ನರಸಿಂಹಚತುರ್ವೇದಿ ಮಂಗಲಮ್ ಎಂಬ ಅಗ್ರಹಾರವಾಗಿದ್ದು ಇದನ್ನು ವಿಷ್ಣುವರ್ಧನ ವೈಷ್ಣವರಿಗೆ ದಾನ ಕೊಟ್ಟಂತೆ ತಿಳಿಯುತ್ತದೆ. ಇಲ್ಲಿಗೆ ಸಮೀಪದಲ್ಲಿರುವ ಮದ್ದೂರು ಕೆರೆಯನ್ನೂ ವರದರಾಜ ದೇವಸ್ಥಾನವನ್ನೂ ಈತನೇ ಕಟ್ಟಿಸಿದನೆಂದು ಪ್ರತೀತಿ. ಇಲ್ಲಿದ್ದ ಕೋಟೆ 1617ರಲ್ಲಿ ರಾಜ ಒಡೆಯರ ವಶವಾಯಿತು. ಹೈದರ್ ಅಲಿ ಇದನ್ನು ದುರಸ್ತಿ ಮಾಡಿಸಿದ. 1701ರಲ್ಲಿ ಲಾರ್ಡ್ ಕಾರ್ನ್‍ವಾಲೀಸ್ ಈ ಕೋಟೆಯನ್ನು ನಾಶಮಾಡಿದ. ಮದ್ದೂರಿನಲ್ಲಿ ನರಸಿಂಹ, ವರದರಾಜ, ದೇಶೇಶ್ವರ ಎಂಬ ಮೂರು ಪ್ರಸಿದ್ಧ ದೇವಾಲಯಗಳಿವೆ. ನರಸಿಂಹ ದೇವಾಲಯ ಹೊಯ್ಸಳ ಶೈಲಿಯದು. ಇದಕ್ಕೆ ದ್ರಾವಿಡ ಶೈಲಿಯ ಗೋಪುರವನ್ನು ಈಚೆಗೆ ಕಟ್ಟಲಾಗಿದೆ. ಇಲ್ಲಿಯ ಉಗ್ರನರಸಿಂಹ ಮೂರ್ತಿ ಕಪ್ಪು ಶಿಲೆಯ ಕೆತ್ತನೆ. ಇದು 2.13 ಮೀಟರ್ ಎತ್ತರವಿದ್ದು ಸುಂದರವಾಗಿದೆ. ಇದೇ ದೇವಾಲಯದಲ್ಲಿ ಒಂದು ಕಡೆ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ಸುಂದರ ವಿಗ್ರಹಗಳಿವೆ. ವರದರಾಜ (ಅಲ್ಲಾಳನಾಥ) ದೇವಾಲಯ ಜೋಳರ ಕಾಲಕ್ಕೂ ಹಿಂದಿನ ಅಥವಾ ಅವರ ಆಳ್ವಿಕೆಯ ಪ್ರಾರಂಭ ಕಾಲದ ರಚನೆ. ಇಲ್ಲಿರುವ ಅಲ್ಲಾಳನಾಥನ ವಿಗ್ರಹ 3.65 ಮೀಟರ್ ಎತ್ತರವಿದ್ದು ಮುಮ್ಮುಖ ಹಾಗೂ ಹಿಮ್ಮುಖಗಳ ಕೆತ್ತನೆ ಸುಂದರವಾಗಿದೆ. ಹಿಮ್ಮುಖದ ಕೆತ್ತನೆ ಹೆಚ್ಚು ಸುಂದರವಾಗಿರುವುದರಿಂದ ಎಲ್ಲ ದೇವರ ಮುಂದೆ ನೋಡು. ಅಲ್ಲಾಳನಾಥನ ಹೊಂದೆ ನೋಡು ಎನ್ನುವ ಗಾದೆ ಮಾತು ಬಳಕೆಗೆ ಬಂದಿರುವಂತೆ ತೋರುತ್ತದೆ. ವಿಷ್ಣುವರ್ಧನ ತನ್ನ ತಾಯಿಗಾಗಿ ಈ ವಿಗ್ರಹವನ್ನು ಪ್ರತಿಷ್ಠಾಪಿಸಿದನೆಂದು ಪ್ರತೀತಿ. ದೇಶೇಶ್ವರ ದೇವಾಲಯ ಗಂಗರ ಕಾಲದ ರಚನೆ. ಇದರ ಹೊರಗೋಡೆಗಳನ್ನು ಇತ್ತೀಚೆಗೆ ಬಳಪದ ಕಲ್ಲಿನಲ್ಲಿ ಕಟ್ಟಿದಂತೆ ತಿಳಿಯುತ್ತದೆ. ದೇವಾಲಯದ ನಂದಿಮಂಟಪ ಸುಂದರವಾಗಿದೆ. ಗ್ರಾಮದೇವತೆ ಮದ್ದೂರಮ್ಮನ ದೇವಾಲಯವೂ ಇಲ್ಲಿದೆ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ.		
(ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ